ಉಡುಪಿ: ದಿನಾಂಕ:27-08-2024 (ಹಾಯ್ ಉಡುಪಿ ನ್ಯೂಸ್) ಇತ್ತೀಚೆಗೆ ಕಾಡಬೆಟ್ಟುವಿನ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಆರೀಫ್ ಮುನ್ನಾ ಮೊಹಮ್ಮದ್ ಆರೀಫ್ ಎಂಬವ ಬಂಧಿತ ಆರೋಪಿಯಾಗಿದ್ದಾನೆ.
ಕಾಡಬೆಟ್ಟು ರಾಮಣ್ಣ ಶೆಟ್ಟಿ ಕಂಪೌಂಡ್ ಬಳಿಯ ಜೀವನ ನಗರ ಎಂಬಲ್ಲಿ ಟಿ. ಪ್ರಶಾಂತ್ ಪೈ ಎಂಬವರ ನಿವಾಸದಲ್ಲಿ ಇತ್ತೀಚೆಗೆ ಆರೋಪಿ ಕಳ್ಳತನ ಮಾಡಿದ್ದ. ಆರೋಪಿಯು ಮನೆಯ ಮುಖ್ಯ ಬಾಗಿಲನ್ನು ಯಾವುದೋ ಸಾಧನ ಬಳಸಿ ಮುರಿದು ಒಳಗೆ ಪ್ರವೇಶಿಸಿ ದೇವರ ಕೋಣೆಯಲ್ಲಿ ಫೋಟೋ ಮೇಲಿದ್ದ ಸುಮಾರು ತಲಾ ಒಂದು ಗ್ರಾಂ ತೂಕವಿರುವ 7 ಚಿನ್ನದ ಲಕ್ಷ್ಮೀ ಪದಕವಿರುವ ಮಾಲೆಯನ್ನು ಕಳ್ಳತನ ಮಾಡಿದ್ದು, ಆತ ಕಳ್ಳತನ ಮಾಡಿದ್ದ ಒಟ್ಟು ಸೊತ್ತುಗಳ ಅಂದಾಜು ಮೌಲ್ಯ 35,000 ರೂ. ಆಗಿತ್ತು ಎನ್ನಲಾಗಿದೆ.
ಪೊಲೀಸರ ವಿಶೇಷ ತಂಡದವರು ಆ. 24ರಂದು ಆರೋಪಿಯನ್ನು ಉಡುಪಿಯ ಕೃಷ್ಣ ಮಠದ ರಾಜಾಂಗಣದ ಬಳಿ ಬೈಕ್ ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯು ಉಡುಪಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಒಟ್ಟು 35,964ರೂ. ಮೌಲ್ಯದ 5.400 ಗ್ರಾಂ ಚಿನ್ನಾಭರಣ ಹಾಗೂ ಕಳವು ಮಾಡಲು ಬಳಸಿದ ಹೀರೋ ಹೊಂಡಾ ಸ್ಪೆಂಡರ್ ಪ್ಲಸ್ ಬೈಕ್ ಮತ್ತು ಕಬ್ಬಿಣದ ರಾಡ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯ ವಿರುದ್ಧ ಈಗಾಗಲೇ ಹಾಸನ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.